  ಮೂಲದೊಡನೆ ಪರಿಶೀಲಿಸಿ

ಕಾಗದ ಹಣ

ಇತಿಹಾಸವನ್ನು ಅವಲೋಕಿಸಿದಾಗ ಗ್ರೀಕರು ಮೊಟ್ಟಮೊದಲಬಾರಿಗೆ ಲೋಹನಾಣ್ಯಗಳನ್ನು ಮತ್ತು ಇತರ ರೂಪದ ಹಣವನ್ನು ರೂಢಿಗೆ ತಂದರು ಎಂದು ತಿಳಿದು ಬರುತ್ತದೆ. ಹಣಕ್ಕೆ ಮೂರು ರೀತಿಯ ಬೆಲೆಗಳು ಇರುತ್ತವೆ. ಮೊದಲನೆಯದು ವಾಸ್ತವಿಕ ಅಥವಾ ಅಂತರ್ಗತ ಮೌಲ್ಯ. ಉದಾಹರಣೆಗೆ ಒಂದು ಐದು ರೂಪಾಯಿಯ ನಾಣ್ಯವನ್ನು ತಯಾರಿಸಲು ತಗುಲುವ ಬೆಲೆಗೆ ಅದರ ವಾಸ್ತವಿಕ ಅಥವಾ ಸ್ವಾಭಾವಿಕ ಬೆಲೆ ಎಂದು ಹೇಳಬಹುದು. ಎರಡನೆಯದು ಮಾರುಕಟ್ಟೆಯ ಬೆಲೆ. ಅಂದರೆ ಯಾವುದೇ ದೇಶದಲ್ಲಿ ಹಣವನ್ನು ಚಿನ್ನ ಅಥವಾ ಬೆಳ್ಳಿಗಳ ಒಟ್ಟು ಮೌಲ್ಯವನ್ನು ಆಧರಿಸಿ ಹಣದ ಬೆಲೆಯನ್ನು ನಿರ್ಧರಿಸುತ್ತಿದ್ದರು. ಮೂರನೆಯದು ಕಾನೂನಿಕ ಚಲಾರ್ಥ. 

   ಬಹಳ ಹಿಂದೆ ಹಣದ ಚಾಲನೆ ನಾವು ತಿಳಿದಷ್ಟು ಸುಲಭವಾಗಿರಲಿಲ್ಲ. ಪದಾರ್ಥಗಳ ವಿನಿಮಯದಿಂದ ಪ್ರಾರಂಭವಾದ ನಂತರ ವಸ್ತುವಿನಿಮಯಗಳ ಚಾಲನೆ ಕೊಂಚ ಮಟ್ಟಿಗೆ ಸುಧಾರಿಸಿತು. ಮುಂದಿನ ಹಂತದಲ್ಲಿ ಕೆಲವು ಸಾಕು ಪ್ರಾಣಿಗಳ, ಹಾಗೂ ದವಸ ಧಾನ್ಯಗಳ ವಿನಿಮಯ ಪರಿಸ್ಥಿತಿಯನ್ನು ಇನ್ನಷ್ಟು ಸುಧಾರಿಸಿತು. ಮುಂದೆ ಕೆಲವು ಸಮುದ್ರದಲ್ಲಿ ವಾಸ ಮಾಡುವ ಹುಳುಗಳ ಚಿಪ್ಪನ್ನು ಹಣವನ್ನಾಗಿ ಉಪಯೋಗಿಸಿ ಪದಾರ್ಥಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. 

   ಜಗತ್ತಿನ ವಿವಿಧ ಭಾಗಗಳಲ್ಲಿ ಈ ಕೆಳಗಿನ ವಸ್ತುಗಳನ್ನು ಹಣವನ್ನಾಗಿ ಉಪಯೋಗಿಸುತ್ತಿದ್ದರು.    

ಜೇಡಿಮಣ್ಣು

ಕವq

ಚಿಪ್ಪು/ಶಂಖಗಳಿಂದ ಮಾಡಿದ ಮಣಗಳು

ಆಮೆಯ ಚೊಪ್ಪುಗಳು

ತಿಮಿಂಗಿಲ eತಿಯ ಸಸ್ತನಿಯ ಹಲ್ಲುಗಳು

ತಿಮಿಂಗಿಲz zಂvಗಳು

ವರಾಹದ ಕೋರೆಹಲ್ಲುಗಳು

ಮgಕುಟಿಕz ತಲೆಚಿಪ್ಪುಗಳು

ಮೇಕೆಗಳು

ಗುಲಾಮರು

ಅಕಿ/ sತ್ತ

ಚಹಾ 

vಂಬಾಕು

ಡಾಮರು ಮೇಣ

ಉಣ್ಣೆ 

ಉಪ್ಪು

ಮಣ್ಣು ಅಗೆಯುವ ಉಪಕರಣಗಳು(ಸನಿಕೆ, ಗುದ್ದಲಿ)

ಮಡಿPಗಳು 

ದೋಣಗಳು

ಂUಣ

ಕಲ್ಲುಗಳು 

ಕಬ್ಬಿಣ

ತಾಮ್ರ

ತ್ತಾಳೆ

Pಂಚು

ಕ್ಕಲ್

PUz

ಧರ್ಮ

ಅಂಟ sÀಲಕಗಳು

Uಂಜೀಫಾಎಲೆ(Pಟಚಿಥಿiಟಿg ಛಿಚಿಡಿಜs)

ಪಶುಗಳು

ಹಂದಿ

ಕುದುgಗಳು

ಕುರಿಗಳು

ತೆನೆ

ದ್ರಾಕ್ಷಾರಸ

ಯರ್

Zಕುಗಳು

ಚಿನ್ನ 

ಬೆಳ್ಳಿ

ಚಿನ್ನಬೆಳ್ಳಿಯ ಮಿಶ್ರಲೋಹ

ಸೀಸ

ವೈಯಕ್ತಿಕ ಸಾಲ

ಬ್ಯಾಂಕುಗಳ ಸಾಲ

ಸರ್ಕಾgz ಸಾಲ 

      

(ಈ ಮಾಹಿತಿಯನ್ನು ಎಲ್.ವಿ.ಚಾಂಡ್ಲೆರ್ ರವರ ಪುಸ್ತಕ "ದಿ ಎಕನಾಮಿಕ್ಸ್ ಆಫ್ ಮನಿ ಬ್ಯಾಂಕಿಂಗ್" 4ನೇ ಆವೃತ್ತಿ ಎನ್,ವೈ. 1964 ಪು12ರಿಂದ ಪಡೆಯಲಾಗಿದೆ)

   ನಂತರ ಲೋಹದ ಚಿಕ್ಕ ಚಿಕ್ಕ ಆಕಾರದ ಚೂರುಗಳನ್ನು ಉಪಯೋಗಿಸಿ ಹಣವನ್ನಾಗಿ ಒಪ್ಪಿಕೊಂಡು ವಿನಿಮಯಮಾಡಿಕೊಳ್ಳಲು ಪ್ರಾರಂಭಿಸಿದರು. ಲೋಹದ ಪ್ರಮಾಣ ಎಲ್ಲ ದೇಶಗಳಲ್ಲಿಯೂ ಒಂದೇ ಪ್ರಮಾಣದಲ್ಲಿ ಇಲ್ಲದಿದ್ದುರಿಂದಾಗಿ ಹಣದ ಬೆಲೆಯನ್ನು ನಿರ್ಧರಿಸಲು ಕಷ್ಟವಾಯಿತು. ಆದ್ದರಿಂದ ಯಾವುದಾದರೂ ಎಲ್ಲ ದೇಶಗಳೂ ಒಪ್ಪಿಕೊಳ್ಳುವಂತಹ ಒಂದು ವ್ಯವಸ್ಥೆಯನ್ನು ರೂಪಿಸಬೇಕಾಯಿತು. ಈ ಹಂತದಲ್ಲಿ ಕಾಗದದ ಹಣ ತನ್ನ ಸ್ವರೂಪವನ್ನು ತಳೆಯಿತು ಹಾಗೂ ಸಾರ್ವತ್ರಿಕ ಮಾನ್ಯತೆ ಪಡೆಯಿತು. 

   ಕ್ರಿ.ಶ.970ರಲ್ಲಿ ಚೀನಾದ ಸ್ಯುಂಗ್ ಸರ್ಕಾರ ಮುದ್ರಿತ ಕಾಗದದ ಹಣವನ್ನು ಸಂಶೋಧಿಸಿತ್ತು. 

ಕ್ರಿ.ಶ. 1789 ಮತ್ತು 1786 ರ ನಡುವೆ ಫ್ರಾನ್ಸಿನ ಕ್ರಾಂತಿಕಾರಿ ಸರ್ಕಾರವು ಹೊಡಡಿಸಿದ್ದ ಕಾಗದದ ಹಣದ ಹೆಸರು `ಅಸಿನೇಟ್' (ಂssigಟಿಚಿಣe)ಎಂದಾಗಿತ್ತು. ಇದನ್ನು ವಶಪಡಿಸಿಕೊಂಡಿದ್ದ ವಿದೇಶಿ ವಸ್ತುಗಳ(ಅoಟಿಜಿisಛಿಚಿಣeಜ gooಜs) ಮೌಲ್ಯಾಧಾರದ ಮೇಲೆ ಮುದ್ರಿಸಲಾಗುತ್ತಿತ್ತು. ಕ್ರಿ.ಶ.1861ರಲ್ಲಿ ಅಮೆರಿಕಾ ಸರ್ಕಾರವು ಚಿನ್ನಬೆಳ್ಳಿಗಳ ಆಧಾರವಿಲ್ಲದೆ ಗ್ರೀನ್‍ಬ್ಯಾಕ್ ಎಂಬ ಹಸರಿನ ಕಾಗದದ ಹಣವನ್ನು ಮುದ್ರಿಸಲು ಪ್ರಾರಂಭಿಸಿತು. 

   ಫ್ರಾನ್ಸ್‍ನ ಜಾನ್ ಲಾ ಎಂಬುವರು ಮೊಟ್ಟಮೊದಲಬಾರಿಗೆ ಅಧಿಕ ಪ್ರಮಾಣದಲ್ಲಿ ಕಾಗದದ ಹಣವನ್ನು ಜಾರಿಗೆ ತಂದರೂ ಫ್ರಾನ್ಸಿನ ಕ್ರಾಂತಿಯ ಸಮಯದಲ್ಲಿ ಫ್ರಾನ್ಸ್ ಹಾಗೂ ಅಮೆರಿಕಾದಲ್ಲಿ ಕಾಗದ ಹಣವು ಮುಕ್ತ ಚಲಾವಣೆಯಲ್ಲಿತ್ತು. 

   ಕಾಗದ ಹಣದ ಗುಣಧರ್ಮಗಳು: ಆರ್ಥಿಕ ಸ್ವರೂಪ, ವಿಶ್ವಾಸ, ಸರಳತೆ, ಭದ್ರತೆ, ಸ್ವಯಂಚಾಲನೆ ಹಾಗೂ ಸ್ಥಿತಿಸ್ಥಾಪಕತೆ.ಇತ್ಯಾದಿಗಳು. 

ಸರ್ಕಾರದಿಂದಾಗಲಿ ಸರ್ಕಾರದ ಪ್ರಾಧಿಕಾರದ ಪಡೆದ ಸಂಸ್ಥೆಯಿಂದಾಗಲಿ ಕಾಗದಪತ್ರರೂಪದಲ್ಲಿ ನೀಡಲಾದ ಹಣ (ಪೇಪರ್ ಮನಿ). ಇವುಗಳನ್ನು ನೋಟುಗಳೆನ್ನುತ್ತಾರೆ. ಚೆಕ್ಕುಗಳೂ ಹುಂಡಿಗಳೂ ಹಣದ ಕಾರ್ಯಭಾರ ನಡೆಸುವುವಾದರೂ ಅವುಗಳ ಮಿತಚಲಾವಣೆಯಿಂದಾಗಿ ಅವನ್ನು ಕಾಗದ ಹಣವೆಂದು ಕರೆಯುವ ರೂಢಿಯಿಲ್ಲ.

 ಇಂಗ್ಲೆಂಡಿನ ಕಾಗದಹಣ ಬ್ಯಾಂಕ್ ಆಫ್ ಇಂಗ್ಲೆಂಡಿನ ಹಾಗೂ ಖಜಾನೆಯ ನೋಟುಗಳಿಂದ ಕೂಡಿದ್ದು. ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್‍ಗಳ ಕೆಲವು ವಾಣಿಜ್ಯ ಬ್ಯಾಂಕುಗಳೂ ನೋಟು ಚಲಾಯಿಸುತ್ತವೆ. ಅಮೆರಿಕ ಸಂಯುಕ್ತಸಂಸ್ಥಾನದ ಖಜಾನೆ ವಿಭಾಗ ಹಾಗೂ ಫೆಡರಲ್ ರಿಸರ್ವ್ ಬ್ಯಾಂಕುಗಳು ಕಾಗದ ಹಣವನ್ನು ಸೃಷ್ಟಿಸುತ್ತವೆ. ಫೆಡರಲ್ ರಿಸರ್ವ್ ಬ್ಯಾಂಕುಗಳು ಐದು ಡಾಲರುಗಳಿಗೆ ಮೇಲ್ಪಟ್ಟ ನೋಟುಗಳನ್ನೂ ಖಜಾನೆ ವಿಭಾಗ ಒಂದು ಮತ್ತು ಎರಡು ಡಾಲರ್ ನೋಟುಗಳ ಜೊತೆಗೆ ಕೆಲವು ಐದು ಮತ್ತು ಹತ್ತು ಡಾಲರ್ ನೋಟುಗಳನ್ನೂ ಚಲಾವಣೆಗೆ ನೀಡುತ್ತವೆ. ಭಾರತದಲ್ಲಿ ಒಂದು ರೂಪಾಯಿಯ ನೋಟನ್ನು ಹಣಕಾಸು ಸಚಿವಾಲಯ ಇದಕ್ಕೆ ಮೇಲ್ಪಟ್ಟು ಎಲ್ಲ ನೋಟುಗಳನ್ನೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯವೂ ಚಲಾವಣೆಗೆ ನೀಡುತ್ತವೆ.

ವಿಕಾಸ: ನೋಟುಗಳು ಹಣವೆಂಬುದಾಗಿ ಹೇಗೆ ಸಾರ್ವಜನಿಕರ ಒಪ್ಪಿಗೆ ಪಡೆದುವು ಎಂಬುದನ್ನರಿಯಬೇಕಾದರೆ ಕಾಗದ ಹಣದ ವಿಕಾಸವನ್ನು ಅವಲೋಕಿಸಬೇಕು. ಕಾಗದ ಹಣದ ವಿಕಾಸದಲ್ಲಿ ನಾಲ್ಕು ಹಂತಗಳನ್ನು ಕ್ರೌತರ್ ಗುರುತಿಸಿದ್ದಾನೆ. ವ್ಯಾಪಾರಿಗಳು ಊರಿಂದೂರಿಗೆ ಹೋಗುವಾಗ ಕಳುವಿನ ಭಯದಿಂದ ನಗದನ್ನು ಕೊಂಡೊಯ್ಯುವ ಬದಲಾಗಿ ತಮ್ಮೂರಿನ ಗಣ್ಯವ್ಯಕ್ತಿ ನೀಡಿದ ಹಣ ಪಡೆಯುವ ಹಕ್ಕಿನ ಪತ್ರಗಳನ್ನು ಕೊಂಡು ಹೋಗುತ್ತಿದ್ದದ್ದು ಮೊದಲನೆಯ ಹಂತ. ಪತ್ರದಲ್ಲಿ ನಮೂದಿಸಿರುವ ಹಣವನ್ನು ವ್ಯಾಪಾರಿ ತನ್ನಲ್ಲಿ ಠೇವಣಿ ಇಟ್ಟಿರುವನೆಂದೂ ಈ ಹಣವನ್ನು ವ್ಯಾಪಾರಿಯ ಆದೇಶದ ಮೇರೆಗೆ ಅವನಿಗೆ ಅಥವಾ ಆತ ಸೂಚಿಸಿದವರಿಗೆ ಕೊಡಲು ತಾನು ಬಾಧ್ಯನೆಂದೂ ಆ ಗಣ್ಯವ್ಯಕ್ತಿ (ಈಗಿನ ಬ್ಯಾಂಕರ್ ಎನ್ನಬಹುದಾದ ವ್ಯಕ್ತಿ) ಬರೆದು ಕೊಡುತ್ತಿದ್ದ. ಮುಂದಿನ ಹಂತದಲ್ಲಿ ಒಂದು ಸಣ್ಣ ಬದಲಾವಣೆ ಕಂಡುಬಂತು. ವ್ಯಾಪಾರಿ ಠೇವಣಿ ಇಟ್ಟಿರುವ ಹಣವನ್ನೆಲ್ಲವನ್ನೂ ಪತ್ರದಲ್ಲಿ ನಮೂದಿಸಿ ಅವನ ಹೆಸರಿನಲ್ಲಿ ಪತ್ರ ಬರೆಯುವುದಕ್ಕೆ ಬದಲಾಗಿ ಪತ್ರ ತರುವವನಿಗೆ ಎಂದು ಬರೆದು ಅನುಕೂಲ ಪರಿಮಾಣದ ಹಣಕ್ಕೆ ಪತ್ರವನ್ನು ತಯಾರಿಸುವ ರೂಢಿ ಜಾರಿಗೆ ಬಂದಿತು. ಹೀಗೆ 1 ಪೌಂ., 10ಪೌಂ ಅಥವಾ 100ಪೌಂ. ಹಣವನ್ನು ಯಾರು ಆ ಪತ್ರಗಳನ್ನು ತೋರಿಸುತ್ತಾರೊ ಅವರಿಗೆ ಕೊಡುವೆವು ಎಂಬ ವಚನವನ್ನೊಳಗೊಂಡ ಪತ್ರಗಳು ಜಾರಿಯಲ್ಲಿ ಬಂದುವು.

 ಹೀಗೆ ಎರಡನೆಯ ಹಂತದ ವರೆಗೂ ವಚನಪತ್ರಗಳು ಹಣದ ಪ್ರತಿನಿಧಿ ರೂಪದಲ್ಲಿ ಬಳಕೆಯಲ್ಲಿದ್ದುವು. ಅವನ್ನು ಪಡೆದ ವ್ಯಾಪಾರಿ ಸಾಲಿಗ ಆ ಪತ್ರಗಳನ್ನು ಹೊರಡಿಸಿದ ಬ್ಯಾಂಕರನಿಂದ ಅವನ್ನು ನಗದು ಹಣಕ್ಕೆ ಪರಿವರ್ತಿಸಿಕೊಳ್ಳಬೇಕಾಗಿತ್ತು. ಆದರೆ ಕಾಲ ಕ್ರಮೇಣ ಪ್ರತಿನಿಧಿರೂಪದ ಹಣವನ್ನೇ ಸ್ವಯಂ ಹಣವಾಗಿ ಬಳಸಲು ಪ್ರಾರಂಭವಾಯಿತು. ಹೀಗೆ ಪತ್ರವನ್ನು (ನೋಟು) ಒಂದು ವ್ಯವಹಾರಕ್ಕೆ ಉಪಯೋಗಿಸಿ ತತ್ ಕ್ಷಣದ ನಗದು ಹಣಕ್ಕೆ ಪರಿವರ್ತಿಸಿಕೊಳ್ಳುವ ಬದಲು ಅದು ಅನೇಕ ವ್ಯವಹಾರಗಳನ್ನು ತೀರಿಸಲು ಬಳಕೆಗೆ ಬರಲಾಗಿ ಒಬ್ಬರ ಕೈಯಿಂದ ಮತ್ತೊಬರ ಕೈಗೆ ಓಡಾಡಲಾರಂಭಿಸಿತು. ಆದರೆ ಎಲ್ಲ ನೋಟುಗಳೂ ಹೀಗೆ ಚಲಾವಣೆಯಲ್ಲಿಯೆ ಇರುತ್ತಿರಲಿಲ್ಲ. ಅವುಗಳಲ್ಲಿ ಕೆಲವು ನಗದಿಗೆ ಪರಿವರ್ತನೆಗಾಗಿ ಬ್ಯಾಂಕರನ ಬಳಿಗೆ ಬರುತ್ತಿದ್ದವು. ನೀಡಲಾದ ನೋಟುಗಳಲ್ಲಿ ಸಾಮಾನ್ಯವಾಗಿ ಒಂದು ಗೊತ್ತಾದ ಪ್ರಮಾಣದ ನೋಟುಗಳು ಮಾತ್ರ ನಗದಿಗಾಗಿ ವಾಪಸಾಗುವುವೆಂಬುದನ್ನು ಬ್ಯಾಂಕರುಗಳು ಅನುಭವದಿಂದ ತಿಳಿದುಕೊಂಡರು. ಹೀಗೆ ಬ್ಯಾಂಕರುಗಳು ತಾವು ಸ್ವೀಕರಿಸಿದ ಠೇವಣಿಗಿಂತ ಹೆಚ್ಚು ಮೊಬಲಗಿನ ನೋಟುಗಳನ್ನು ಚಲಾವಣೆಗೆ ನೀಡಲು ಸಾಧ್ಯವಾಯಿತು. ಇದು ಮೂರನೆಯ ಹಾಗೂ ಗಮನಾರ್ಹವಾದ ಹಂತ. ಈ ಹಂತದಲ್ಲಿ ಬ್ಯಾಂಕು ನೋಟು ಸ್ವಯಂ ಹಣವಾಗಿ ಪುರಸ್ಕøತವಾಯಿತಲ್ಲದೆ ನಗದಿಗಿಂತ ಅಧಿಕಪ್ರಮಾಣದ ನೋಟುಗಳನ್ನು ಹೊರಡಿಸುವ ಅನುಕೂಲವುಂಟಾಯಿತು. ಅಲ್ಲದೆ ಈ ಮಧ್ಯೆ ನೋಟುಗಳನ್ನು ಕಾನೂನಿನ ದೃಷ್ಟಿಯಲ್ಲೂ ಹಣವೆಂದು ಗುರುತಿಸಲಾಗಿ ಅವುಗಳ ಪರಿವರ್ತನೆಗೆ ಸಂಬಂಧಿಸಿದಂತೆ ಒಂದು ಕ್ರಾಂತಿಕಾರಕ ಬದಲಾವಣೆಯುಂಟಾಯಿತು. ಅದೇನೆಂದರೆ, ಕಾಗದಹಣ ಸುಭದ್ರವಾಗಿರಬೇಕಾದರೆ ಚಿನ್ನಕ್ಕಾಗಲಿ ಚಿನ್ನದ ನಾಣ್ಯಗಳಿಗಾಗಲಿ ಪರಿವರ್ತನೆಯಾಗುವ ಅವಕಾಶವಿರಬೇಕೆಂಬ ಸಾಮಾನ್ಯ ಭಾವನೆ ಅಲ್ಲಿಯವರೆಗೆ ಬೆಳೆದುಬಂದಿತ್ತು. ಆ ಅವಕಾಶವಿದ್ದುದರಿಂದಲೇ ನೋಟುಗಳು ಜನರ ನಂಬಿಕೆ ಗಳಿಸಿದ್ದುವು. ಆದರೆ ಯಾವಾಗ ನೋಟುಗಳು ಕಾಲಕ್ರಮೇಣ ಕಾನೂನಿನ ಬಲವುಳ್ಳ ಹಣವೆಂದು ಘೋಷಿತವಾಗಿ ಬಳಕೆಗೆ ಬಂದವೋ ಅಂದಿನಿಂದ ಪರಿವರ್ತನೆಯ ಅವಕಾಶ ಅನಾವಶ್ಯಕವಾಯಿತು. ಪರಿವರ್ತನೆಯೇ ಜನರ ನಂಬಿಕೆಗೆ ಆಧಾರಭೂತವಾದ್ದೆಂಬ ಭಾವನೆ ಬದಲಾಯಿತು. ಹಣ ಮಾಡಬೇಕಾದ ಕಾರ್ಯಗಳನ್ನು ನೋಟುಗಳು ಮಾಡುವುವೆಂಬದನ್ನು ಎಂದು ಮನಗಾಣಲಾಯಿತೋ ಅಂದಿನಿಂದ ಅವುಗಳ ಮೇಲೆ ಜನರಿಗೆ ನಂಬಿಕೆ ಬಂತು. ಆದ್ದರಿಂದ ನೋಟುಗಳ ಪರಿವರ್ತನೆಯ ಸಾಧ್ಯತೆ ಅನಾವಶ್ಯಕವಾಯಿತು. ವಾಹಕರಿಗೆ (ಬೇರರ್) ಪಾವತಿಮಾಡುವುದಾಗಿ ವಚನ ನೀಡುತ್ತೇನೆಂದು ನೋಟಿನ ಮೇಲೆ ಅಚ್ಚಾಗಿರುವ ಒಕ್ಕಣೆಗೆ ಈಗ ಏನೂ ಅರ್ಥವಿಲ್ಲ. ಬ್ಯಾಂಕಿನಲ್ಲಿ ನೋಟನ್ನು ಕೊಟ್ಟರೆ ಚಿಲ್ಲರೆ ನಾಣ್ಯ ಇಲ್ಲವೆ ಸಣ್ಣ ವರ್ಗದ ನೋಟುಗಳನ್ನು ಪಡೆಯಬಹುದೇ ಹೊರತು ಚಿನ್ನ ಇಲ್ಲವೆ ಚಿನ್ನದ ನಾಣ್ಯಗಳಿಗೆ ನೋಟನ್ನು ಪರಿವರ್ತಿಸುವ ಅವಕಾಶ ಈಗ ಇಲ್ಲ. ಇದು ಕಾಗದ ಹಣದ ವಿಕಾಸದ ನಾಲ್ಕನೆಯ ಹಾಗೂ ಕೊನೆಯ ಹಂತ.

    ಕಾಗದದ ಹಣವನ್ನು ಮುದ್ರಿಸಲು ಇರುವ ವಿಧಾನಗಳು : 

1. ಸರಳ ಠೇವಣಿ ವಿಧಾನ

2. ಗರಿಷ್ಠ ನ್ಯಾಸರಕ್ಷಣಾ ವಿಧಾನ (ಮ್ಯಾಕ್ಸಿಮಂ ಫಿಡ್ಯುಷಿಯರಿ ಸಿಸ್ಟಮ್)

3. ಸ್ಥಿರ ನ್ಯಾಸರಕ್ಷಣಾ ವಿಧಾನ(ಫಿಕ್ಸಡ್ ಫಿಡ್ಯುಷಿಯರಿ ಸಿಸ್ಟಮ್)

4. ಅನುಪಾತೀಯ ಮೀಸಲು ವಿಧಾನ 

5. ಕನಿಷ್ಟ ಮೀಸಲು ವಿಧಾನ 

6. ಶೇಕಡಾವಾರು ಠೇವಣಿ ವಿಧಾನ

7. ಹೆಚ್ಚುವರಿ ಲಾಭಾಂಶ ಠೇವಣಿ ವಿಧಾನ 

ಕಾಗದ ಹಣ ಮತ್ತು ಉದ್ದರಿ ಹಣ: ಈ ಸಂದರ್ಭದಲ್ಲಿ ನೋಟುಗಳಿಗೂ ಚೆಕ್ಕು ರೂಪದ ಬ್ಯಾಂಕು ಹಣ ಅಥವಾ ಉದ್ದರಿ ಹಣಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಬಹುದು. ಚೆಕ್ಕುಗಳ ರೂಪದಲ್ಲಿ ಪ್ರಚಲಿತವಾಗಿರುವ ಹಣ ಪ್ರಭೇಧವನ್ನು ನೋಟುಗಳು ಪ್ರಥಮ ಹಂತದಲ್ಲಿದಂತೆ ಹಣ ಪಡೆಯುವ ಹಕ್ಕಿನ ಪತ್ರಗಳೆನ್ನಬಹುದೇ ಹೊರತು ಸ್ವಯಂ ಹಣವೇನೂ ಅಲ್ಲ. ಚೆಕ್ಕು ಕೊಟ್ಟ ವ್ಯಕ್ತಿಯ ಬ್ಯಾಂಕು ಲೆಕ್ಕದಲ್ಲಿ ಅಷ್ಟೊಂದು ಹಣವಿದೆ ಎಂಬ ನಂಬಿಕೆಯೇ ಸಾಲತೀರುವೆಗಾಗಿ ಚೆಕ್ಕು ಸ್ವೀಕರಿಸಲು ಸಾಲಿಗ ಒಪ್ಪಲು ಕಾರಣ. ಎಲ್ಲಿಯ ವರೆಗೆ ಈ ನಂಬಿಕೆಯಿರುತ್ತದೆಯೊ ಅಲ್ಲಿಯ ವರೆಗೆ ಚೆಕ್ಕುಗಳು ಹಣದ ಕಾರ್ಯ ಮಾಡುತ್ತವೆ. ಚೆಕ್ಕುಗಳಿಗೆ ಕಾನೂನು ಬಲವಿಲ್ಲದ ಕಾರಣ ಸಾಲತೀರುವೆಯಲ್ಲಿ ಅವನ್ನು ಸ್ವೀಕರಿಸಲೇಬೇಕೆಂಬ ಕಡ್ಡಾಯವೇನೂ ಇಲ್ಲ. ಆದರೆ ಕಾಗದ ಹಣ ರೂಢಿಯಿಂದಲೂ ಕಾನೂನಿನ ಬಲದಿಂದಲೂ ಸ್ವೀಕಾರಾರ್ಹತೆ ಪಡೆದಿದ್ದು, ಅದನ್ನು ಸಾಲತೀರುವೆಯಲ್ಲಿ ಕಡ್ಡಾಯವಾಗಿ ಸ್ವೀಕರಿಸಲೇಬೇಕೆಂಬ ನಿಯಮವಿದೆ. ಆದರೂ ಉದ್ದರಿ ಹಣದಲ್ಲಿ ಒಂದು ಅನುಕೂಲವುಂಟು. ಒಬ್ಬ ವ್ಯಕ್ತಿಯ ಬಳಿ ಇರುವ ಕಾಗದ ಹಣ ನಾಶವಾದರೆ ಅಷ್ಟು ಹಣ ಹೋದಂತೆಯೇ ಸರಿ. ಆದರೆ ಚೆಕ್ಕು ಕೇವಲ ಹಣ ಪಡೆಯುವ ಹಕ್ಕು ಪತ್ರವಾದ್ದರಿಂದ ಇಲ್ಲಿ ಆ ಭಯವಿಲ್ಲ.

ನೀಡಿಕೆ ನಿಯಂತ್ರಣ: ಆರಂಭದಲ್ಲಿ ಅನೇಕ ವಾಣಿಜ್ಯ ಬ್ಯಾಂಕುಗಳು ನೋಟು ನೀಡಿಕೆಯ ಕಾರ್ಯದಲ್ಲಿ ನಿರತವಾಗಿದ್ದುವಾದರೂ ಕ್ರಮೇಣ ಇದು ಸರ್ಕಾರದ ಪರಮಾಧಿಕಾರವಾಗಿ ಪರಣಮಿಸಿರುವುದನ್ನು ಪಾಶ್ಚಾತ್ಯರಾಷ್ಟ್ರಗಳ ಇತಿಹಾಸದಲ್ಲಿ ಕಾಣಬಹುದು. ಸರ್ಕಾರ ನೇರವಾಗಿ ನೋಟು ನೀಡಿಕೆಯ ಕಾರ್ಯದಲ್ಲಿ ನಿರತವಾಗದೆ ಇದನ್ನು ಕೇಂದ್ರೀಯ ಬ್ಯಾಂಕಿಗೆ ವಹಿಸಿಕೊಟ್ಟಿರುತ್ತದೆ. ಈ ಪ್ರವೃತ್ತಿಗೆ ಕಾರಣಗಳು ಮುಖ್ಯವಾಗಿ ಎರಡು: 1 ಸರ್ಕಾರ ತನಗೆ ಆವಶ್ಯವಾದಾಗಲೆಲ್ಲ ನೋಟುಗಳನ್ನು ಸೃಷ್ಟಿಸಿ ಖರ್ಚಿಗೆ ಉಪಯೋಗಿಸಿಕೊಳ್ಳಲು ದುಷ್ಪ್ರೇರಣೆಯಾಗಬಹುದೆಂಬ ಭಯ. 2 ಹಣದ ಸರಬರಾಯಿ ವಾಣಿಜ್ಯ ವಹಿವಾಟುಗಳ ಆವಶ್ಯಕತೆಗೆ ಅನುಗುಣವಾಗಿ ಬದಲಾವಣೆ ಹೊಂದಬೇಕು. ಅರ್ಥವ್ಯವಸ್ಥೆಯ ಹಣದ ಆವಶ್ಯಕತೆಗಳನ್ನೂ ಅದರ ನಾಡಿಯ ಮಿಡಿತವನ್ನು ಸರ್ಕಾರಕ್ಕಿಂತ ಬ್ಯಾಂಕು ಚೆನ್ನಾಗಿ ಅರಿತಿರುತ್ತದೆ ಎಂಬ ನಂಬಿಕೆಯುಂಟು. ಆದರೆ ನೋಟು ನೀಡಿಕೆಯ ಅಧಿಕಾರವನ್ನು ಅನೇಕ ವಾಣಿಜ್ಯ ಬ್ಯಾಂಕುಗಳಿಗೆ ಹಂಚಿಕೊಡುವ ಬದಲು ರಾಷ್ಟ್ರದ ಪರಮೊಚ್ಚ ಹಣ ಪ್ರಾಧಿಕಾರಿಯಾದ ಕೇಂದ್ರೀಯ ಬ್ಯಾಂಕಿಗೆ ಅದನ್ನು ವಹಿಸಿಕೊಡುವುದು ಅತ್ಯಂತ ಉಚಿತ. ಇದರಿಂದ ಹಣ ಚಲಾವಣೆಯಲ್ಲಿ ಏಕರೂಪತೆ ಸಾಧ್ಯವಾಗುತ್ತದೆ. ಈ ಕಾರಣಗಳಿಂದಾಗಿ ಸಾಮಾನ್ಯವಾಗಿ ನೋಟು ನೀಡಿಕೆಯ ಏಕಸ್ವಾಮ್ಯವನ್ನು ಕೇಂದ್ರೀಯ ಬ್ಯಾಂಕು ಪಡೆದಿರುತ್ತದೆ. ಅದು ಈ ಕಾರ್ಯಭಾರದ ನಿರ್ವಹಣೆಯಲ್ಲಿ ಮುಖ್ಯವಾಗಿ ಅನುಸರಿಸಬೇಕಾದ ನಿಯಮಗಳು ಎರಡು: ಪುಟಿತತೆ ಮತ್ತು ಭದ್ರತೆ. ಯಾವುದೇ ನೋಟು ಪದ್ದತಿ ವಾಣಿಜ್ಯ ವಹಿವಾಟುಗಳು ಏರಿಳಿತಗಳಿಗೆ ತಕ್ಕಂತೆ ಸ್ವಯಂಚಲಿಯಾಗಿ ಹಿಗ್ಗುವ ಕುಗ್ಗುವ ಅನುಕೂಲ ಪಡೆದಿರಬೇಕೆಂಬುದು ಒಂದನೆಯ ನಿಯಮ. ಹೊರಡಿಸಲಾದ ನೋಟುಗಳಿಗೆ ಬೆಂಗಾವಲಾಗಿ ಆಸ್ತಿಗಳನ್ನಿಡಬೇಕೆಂಬುದು ಎರಡನೆಯದು. ಇದುವರೆಗೆ ನಾನಾ ದೇಶಗಳಲ್ಲಿ ಅನುಸರಿಸಿಕೊಂಡುಬಂದಿರುವ ಕೆಲವು ನೋಟು ನೀಡಿಕೆ ಪದ್ದತಿಗಳ ಪರಿಚಯವನ್ನು ಮುಂದೆ ಕೊಡಲಾಗಿದೆ.

ಇಂಗ್ಲೆಂಡಿನಲ್ಲಿ ಸ್ಥಿರ ವಿಶ್ವಾಸಾಶ್ರಿತ ನೋಟುನೀಡಿಕೆ ಪದ್ದತಿ ಜಾರಿಗೆ ಬಂದದ್ದು 19 ನೆಯ ಶತಮಾನದ ಮಧ್ಯಭಾಗದಲ್ಲಿ. ಈ ಪದ್ದತಿಯ ಪ್ರಕಾರ ಇಂಗ್ಲೆಂಡಿನ ಕೇಂದ್ರೀಯ ಬ್ಯಾಂಕಾದ ಬ್ಯಾಂಕ್ ಆಫ್ ಇಂಗ್ಲೆಂಡ್ ಒಂದು ನಿಗದಿಯಾದ ಮಿತಿಯವರೆಗೆ ಅಮೂಲ್ಯ ಲೋಹದ ಬೆಂಗಾವಲಿಲ್ಲದೆಯೆ ನೋಟುಗಳನ್ನು ನೀಡಬಹುದೆಂದೂ ಈ ನೋಟುಗಳಿಗೆ ಸರ್ಕಾರಿ ಪ್ರತಿಭೂತಿಗಳನ್ನು (ಸೆಕ್ಯೂರಿಟೀಸ್) ಬೆಂಗಾವಲಾಗಿಟ್ಟು ಕೊಂಡರೆ ಸಾಕೆಂದೂ ರೂಢಿಯಾಗಿ ಬಂತು. ನೋಟು ನೀಡಿಕೆಯ ಈ ಮಿತಿಯನ್ನು ವಿಶ್ವಾಸಾಶ್ರಿತ ಮಿತಿ (ಫೈಡ್ಯೂಷಿಯರಿ ಲಿಮಿಟ್) ಎಂದು ಕರೆಯಲಾಯಿತು. ಈ ಮಿತಿಗೆ ಮೀರಿ ಹೊರಡಿಸಲಾದ ಪ್ರತಿಯೊಂದು ನೋಟಿಗೂ ಅದರ ಮೌಲ್ಯಕ್ಕನುಗುಣವಾದ ಅಮೂಲ್ಯ ಲೋಹವನ್ನು ಮೀಸಲಾಗಿಡಬೇಕೆಂದಾಯಿತು. ಇದು ನೋಟುಗಳ ಅತಿಪ್ರಸರಣಕ್ಕೆ ಪ್ರತಿಬಂಧಕವಾಗಿ ಪರಿಣಮಿಸುತ್ತದೆ. ನೋಟು ಪದ್ದತಿಗೆ ಇದರಿಂದ ಒಂದು ಸುಭದ್ರ ಆಧಾರ ಸಿಕ್ಕಿದಂತಾಯಿತು. ಆದರೆ ಅವಶ್ಯವಿದ್ದಾಗ ಹಣ ವಿಸ್ತರಣೆಗೆ ಅವಕಾಶ ನೀಡುವಂತಿರಲಿಲ್ಲವಾದ ಕಾರಣ ಈ ಪದ್ದತಿಯಲ್ಲಿ ಪುಟಿತ ಗುಣವಿಲ್ಲವೆಂಬ ಟೀಕೆಗೆ ಇದು ಗುರಿಯಾಯಿತು. ನೋಟು ನೀಡಿಕೆಗೆ ಪುಟಿತತೆ ದೊರಕಿಸಿಕೊಡುವ ದೃಷ್ಟಿಯಿಂದ ಇಂಗ್ಲೆಂಡಿನ ಸರ್ಕಾರ ಆಗಿಂದಾಗ್ಗೆ ವಿಶ್ವಾಸಾಶ್ರಿತ ಮಿತಿಯನ್ನು ಏರಿಸುತ್ತ ಬಂದಿದೆ. ಜಪಾನ್ ಮತ್ತು ನಾರ್ವೇಗಳು ಈ ಪದ್ದತಿಯನ್ನು ಅನುಸರಿಸುತ್ತಿರುವ ಇತರ ದೇಶಗಳು.

ಜರ್ಮನಿ, ಫ್ರಾನ್ಸ್ ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಬಳಕೆಯಲ್ಲಿರುವುದು ಅನುಪಾತಿ ಸಂಚಿತ ಪದ್ದತಿ (ಪ್ರಪೋರ್ಷನಲ್ ರಿಸರ್ವ್ ಸಿಸ್ಟಂ). ಈ ಪದ್ದತಿಯಲ್ಲಿ ರಕ್ಷೆಯಾಗಿಡುವ ಲೋಹದ ಮೀಸಲು, ಚಲಾವಣೆಗೆ ಬಿಟ್ಟಿರುವ ನೋಟುಗಳ ಮೌಲ್ಯದ ಯಾವುದೋ ಒಂದು ಪ್ರಮಾಣದಷ್ಟಿರಬೇಕು. ಉಳಿದುದಕ್ಕೆ ಸರ್ಕಾರಿ ಪ್ರತಿಭೂತಿಗಳು ಹಿನ್ನೆಲೆಯಾಗಿದ್ದರೆ ಸಾಕು ಎಂಬ ನಿಯಮವುಂಟು. ಉದಾಹರಣೆಗೆ, 1956ರ ವರೆಗೆ ಭಾರತದಲ್ಲಿ ಜಾರಿಯಲ್ಲಿದ್ದ ಈ ಪದ್ದತಿಯ ಪ್ರಕಾರ ನೀಡಿಕೆಯಾದ ನೋಟುಗಳಿಗೆ ಇಡಲಾಗುತ್ತಿದ್ದ ರಕ್ಷೆಯ ಮೌಲ್ಯದಲ್ಲಿ ಸೇ. 40ರಷ್ಟಾದರೂ ಚಿನ್ನ ಮತ್ತು ಸ್ಟರ್ಲಿಂಗ್ ಪ್ರತಿಭೂತಿಗಳ ರೂಪದಲ್ಲಿರಬೇಕೆಂದೂ ಇದರಲ್ಲಿ ಚಿನ್ನದ ಭಾಗ ರೂ. 40 ಕೋಟಿಗಿಂತ ಕಡಿಮೆಯಿರಬಾರದೆಂದೂ ಉಳಿದದ್ದು ರುಪಾಯಿ ಪ್ರತಿಭೂತಿಗಳ ರೂಪದಲ್ಲಿರಬಹುದೆಂದೂ ನಿಯಮವಿತ್ತು. ಈ ಪದ್ದತಿಯಲ್ಲಿ ಎರಡು ಅನುಕೂಲಗಳುಂಟು: 1 ಇಲ್ಲಿ ಅನಾವಶ್ಯಕವಾಗಿ ನೋಟುಗಳ ವಿಸ್ತರಣೆ ಕೈಗೊಳ್ಳುವ ಪ್ರವೃತ್ತಿಗೆ ತಡೆಯಿರುತ್ತದೆ. ಏಕೆಂದರೆ ಈ ನಿಯಮದ ಪ್ರಕಾರ ಪ್ರತಿ 100 ರೂ. ಮೌಲ್ಯದ ನೋಟುಗಳನ್ನು ಸೃಷ್ಟಿಸಬೇಕಾದರೂ ಕೊನೆಯ ಪಕ್ಷ 40 ರೂ. ಮೌಲ್ಯದ ಚಿನ್ನ ಮತ್ತು ಸ್ಟರ್ಲಿಂಗ್ ಮೀಸಲಿಡಬೇಕು. 2 ಈ ಪದ್ದತಿ ನೋಟು ಚಲಾವಣೆಗೆ ಸಾಕಷ್ಟು ಪುಟಿತತೆ ನೀಡುತ್ತದೆ.

ಕೆಲವು ದೇಶಗಳಲ್ಲಿ ಪ್ರಚಲಿತವಾಗಿರುವ ಮತ್ತೊಂದು ಪದ್ದತಿಯೆಂದರೆ ಕನಿಷ್ಠ ಮೀಸಲು ಪದ್ದತಿ (ಮಿನಿಮಮ್ ರಿಸರ್ವ್ ಸಿಸ್ಟಂ). ಭಾರತದ ಎರಡನೆಯ ಪಂಚವಾರ್ಷಿಕ ಯೋಜನೆಯ ಕಾಲದಲ್ಲಿ ಅಧಿಕ ಪರಿಮಾಣದಲ್ಲಿ ನೋಟು ವಿಸ್ತರಣೆಯ ಆವಶ್ಯಕತೆಯಿದ್ದಾಗ ಆವರೆಗೆ ಪ್ರಚಲಿತವಿದ್ದ ಅನುಪಾತಿ ಪದ್ದತಿ ಸಾಕಷ್ಟು ಪುಟಿತತೆಯುಳ್ಳದ್ದಾಗಿಲ್ಲವೆಂಬುದು ಭಾರತ ಸರ್ಕಾರದ ಗಮನಕ್ಕೆ ಬಂತು. ಈ ಕಾರಣದಿಂದ ಅಕ್ಟೋಬರ್ 1956ರಲ್ಲಿ ಭಾರತ ಸರ್ಕಾರ ಒಂದು ಕಾಯಿದೆಯ ಮೂಲಕ ಕನಿಷ್ಠ ಮೀಸಲು ಪದ್ದತಿಯನ್ನು ಜಾರಿಗೆ ತಂದಿತು. ಭಾರತದಲ್ಲಿ ಈಗ ಪ್ರಚಲಿತವಾಗಿರುವ ಏರ್ಪಾಡಿನ ಪ್ರಕಾರ ರಿಸರ್ವ್ ಬ್ಯಾಂಕು ನೋಟುಗಳಿಗೆ ಇಡುವ ರಕ್ಷೆಯಲ್ಲಿ ತನ್ನ ಮತ್ತು ವಿದೇಶೀ ವಿನಿಮಯ ಪತ್ರಗಳ ಭಾಗ ರೂ. 200 ಕೋಟಿಯಷ್ಟು ಇದ್ದರೆ ಸಾಕೆಂದೂ ಇದರಲ್ಲಿ ಚಿನ್ನದ ಭಾಗ ರೂ. 115 ಕೋಟಿಗಿಂತ ಕಡಿಮೆಯಿರಕೂಡದೆಂದೂ ನಿಯಮವಿದೆ. ಇದರಿಂದ ನೋಟು ಚಲಾವಣೆಗೆ ಯಥೇಚ್ಛವಾಗಿ ಪುಟಿಕತೆ ದೊರಕಿದಂತಾಗುತ್ತದೆ. ಈ ಪದ್ದತಿ ನೋಟು ಸೃಷ್ಟಿಕಾರ್ಯಕ್ಕೆ ಯಾವ ಬಗೆಯ ತಡೆಯನ್ನೂ ಹಾಕದ ಕಾರಣ ಇದು ಅತಿ ಪ್ರಸರಣಕ್ಕೆ ಅವಕಾಶ ಮಾಡಿಕೊಡಬಹುದು.

 ಹೀಗೆ ಈಗ ಅನುಷ್ಠಾನದಲ್ಲಿರುವ ಯಾವ ಪದ್ದತಿಯಲ್ಲೂ ಹಿಂದಿನ ಸುವರ್ಣ ಪ್ರಮಿತಿಯಲ್ಲಿದಂತೆ ಪೂರ್ಣ ರಕ್ಷೆಯ ನಿಯಮವನ್ನು ಅನುಸರಿಸುತ್ತಿಲ್ಲ; ಇದರ ಆವಶ್ಯಕತೆಯೂ ಇಲ್ಲ. ನೋಟುಗಳನ್ನು ಪರಿವರ್ತಿಸಬೇಕಾದಲ್ಲಿ ಮಾತ್ರ ಪೂರ್ಣ ರಕ್ಷೆಯ ಆವಶ್ಯಕತೆ ಕಂಡುಬರುತ್ತದೆ. ಆದರೆ ನೋಟುಗಳು ಹಣದ ಎಲ್ಲ ಕಾರ್ಯಗಳನ್ನೂ ಮಾಡುವ ಕಾರಣ ಸಾರ್ವಜನಿಕರು ಅವನ್ನು ಪರಿವರ್ತಿಸಿಕೊಳ್ಳುವ ಆವಶ್ಯಕತೆ ಆಂತರಿಕವಾಗಿಯಂತೂ ಕಾಣುವುದಿಲ್ಲ. ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ನೋಟುಗಳ ಪರಿವರ್ತನೆಯ ಆವಶ್ಯಕತೆಯುಂಟಾಗುತ್ತದೆ. ಆದರೆ ಸರ್ಕಾರ ಇದಕ್ಕಾಗಿ ಸಾಕಷ್ಟು ವಿದೇಶಿ ವಿನಿಮಯ ಸಂಚಿತಿಯನ್ನು (ರಿಸರ್ವ್) ಕೂಡಿಸಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ. ಜೊತೆಗೆ ಪೂರ್ಣ ಉದ್ಯೋಗ ಸಾಧನೆ ಮತ್ತು ರಾಷ್ಟ್ರೀಯ ಉತ್ಪನ್ನದ ಏರಿಕೆಗೆ ನಾಣ್ಯಪದ್ದತಿಯಲ್ಲಿ ಸಾಕಷ್ಟು ಪುಟಿತತೆಯಿರಬೇಕು. ಅರ್ಥವ್ಯವಸ್ಥೆಯ ಆವಶ್ಯಕತೆಗೆ ತಕ್ಕ ಹಾಗೆ ನೋಟು ವಿಸ್ತರಣೆಗೆ ಅವಕಾಶವಿರಬೇಕು. ಪೂರ್ಣರಕ್ಷೆಯ ನಿಯಮವನ್ನು ಪಾಲಿಸಿದ್ದೇ ಆದರೆ ಲೋಹ ಸಂಚಿತಿಯ ಅಭಾವದ ಕಾರಣ ಈ ಅನುಕೂಲ ಕಡಿದುಹೋಗುತ್ತದೆ. ಈ ಕಾರಣದಿಂದಲೇ ಪಾಶ್ರ್ವ ಇಲ್ಲವೇ ಕನಿಷ್ಠ ರಕ್ಷೆಯ ನಿಯಮ ಅತ್ಯಂತ ಉಚಿತವಾದದ್ದು. ಆದರೆ ಇಲ್ಲಿಯ ಒಂದು ಭಯವೆಂದರೆ ನೋಟುಗಳ ಅತಿ ವಿಸ್ತರಣೆ, ಅತಿಪ್ರಸರಣ. ಆದರೂ ಅರ್ಥವ್ಯವಸ್ಥೆಯ ಆವಶ್ಯಕತೆಗೆ ತಕ್ಕಂತೆ ಮಾತ್ರ ನೋಟುವಿಸ್ತರಣೆಯನ್ನು ಕೈಗೊಂಡರೆ ಈ ಭಯ ಇರುವುದಿಲ್ಲ. ವಾಸ್ತವವಾಗಿ ಕೇಂದ್ರೀಯ ಬ್ಯಾಂಕುಗಳು ಬೆಲೆಗಳ ಹತೋಟಿಯ, ಪೂರ್ಣೋದ್ಯೋಗ ಸಾಧನೆಯ ಮತ್ತು ರಾಷ್ಟ್ರೀಯ ಉತ್ಪನ್ನದ ಪ್ರವರ್ತನೆಯ ಧ್ಯೇಯಗಳನ್ನು ಗಮನದಲ್ಲಿಟ್ಟುಕೊಂಡು ನೋಟು ವ್ಯವಸ್ಥೆಯನ್ನು ಪ್ರಬದ್ದಗೊಳಿಸುವುದರಲ್ಲಿ ಮಗ್ನವಾಗಿವೆ.

 

(ಜಿ.ಬಿ.ಕೆ.; ಎ.ಬಿ.ಎ.)

(ಪರಿಷ್ಕರಣೆ: ಜಿ.ಆರ್.ವಿ,; ವೈ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ